ಯಾಕೆ ಮೂರ್ಖನಾದ್ಯೋ ಮನುಜ
ರಾಗ: ನಾದನಾಮಕ್ರಿಯೆ.   ತಾಳ: ಆದಿ.
ಯಾಕೆ ಮೂರ್ಖನಾದ್ಯೋ ಮನುಜ
ಯಾಕೆ ಮೂರ್ಖನಾದ್ಯೋ   ||ಪ||

ಯಾಕೆ ಮೂರ್ಖನಾದ್ಯೋ ನೀನು
ಕಾಕುಬುದ್ಧಿಯನ್ನು ಬಿಟ್ಟು
ಲೋಕನಾಥನನ್ನು ನೆನೆ ಕಂಡ್ಯ ಮನುಜ  ||೧||

ಸಾಧು ಸಜ್ಜನ ಸಂಗ ಮಾಡು
ಭೇದಾಭೇದ ತಿಳಿದು ನೋಡು
ವಾದ ಬುದ್ಧಿ ಮಾಡುವರೇನೋ ಮನುಜ  ||೨||

ದಾನ ಧರ್ಮವನ್ನು ಮಾಡು
ಜ್ಞಾನದಿಂದ ತಿಳಿದು ನೋಡು
ಹೀನಬುದ್ಧಿ ಮಾಡುವರೇನೋ ಮನುಜ  || ೩ ||

ಮಕ್ಕಳು ಹೆಂಡಿರು ತನ್ನವರೆಂದು
ರೊಕ್ಕವನ್ನು ಗಳಿಸಿಕೊಂಡು
ಸೊಕ್ಕಿನಿಂದ ತಿರುಗುವರೇನೋ ಮನುಜ  ||೪||

ಅಂತಕನ ದೂತರು ಬಂದು
ಕಂತೆ ಕಟ್ಟು ಹೊರಡು ಎಂದು
ನಿಂತರೆಲ್ಲರು ಬಿಡಿಸುವರೇನೋ ಮನುಜ  ||೫||

ಅರಿಷಡ್ವರ್ಗದ ಆಟವ ಬಿಟ್ಟು
ಪುರಂದರವಿಠಲನ ಧ್ಯಾನದೊಳಿಟ್ಟು
ಪರಗತಿ ದಾರಿಯ ನೋಡೋ ಮನುಜ || ೬ ||ದಾಸವಾಣಿ
ರಚನೆ:- ಪುರಂದರದಾಸರು.

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ

ಉಲ್ಲೇಖ